ನಮ್ಮ ಲೋಕೋಪಕಾರ ಕೆಲಸದ ಅತ್ಯಂತ ಮಹತ್ವದ ಕ್ಷೇತ್ರವು ಮಕ್ಕಳ ಕಲ್ಯಾಣ, ರಕ್ಷಣೆ ಮತ್ತು ಯೋಗಕ್ಷೇಮಕ್ಕೆ ಸಮರ್ಪಿತವಾಗಿದೆ
ನಮ್ಮ ಅನುದಾನ ಕಾರ್ಯಕ್ರಮದ ಮೂಲಕ, ದೇಶದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಕೆಲವು ದುರ್ಬಲ ಹಿನ್ನೆಲೆಯ ಮಕ್ಕಳೊಂದಿಗೆ ಕೆಲಸ ಮಾಡುತ್ತಿರುವ 100ಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ಬೆಂಬಲಿಸುತ್ತೇವೆ.
ದುರ್ಬಲ ಹಿನ್ನೆಲೆಯ ಮಕ್ಕಳ ಹರವು ವಿಶಾಲವಾಗಿದ್ದು, ಅದು ಏಕ-ಪೋಷಕ ಕುಟುಂಬಗಳು, ದಿನಗೂಲಿ ಕಾರ್ಮಿಕರು, ವಲಸೆ ಕುಟುಂಬಗಳು; ಬೀದಿಬದಿಯಲ್ಲಿ ವಾಸಿಸುವ ಮಕ್ಕಳು, ಅನಾಥರು, ಮನೆಯಿಂದ ತಪ್ಪಿಸಿಕೊಂಡವರು ಮತ್ತು ಪರಿತ್ಯಕ್ತ ಮಕ್ಕಳನ್ನು ಒಳಗೊಂಡಿದೆ.
ಕ್ಯಾನ್ಸರ್ ಮತ್ತು ಎಚ್ಐವಿಯಂತಹ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಕೊಳೆಗೇರಿಗಳು ಮತ್ತು ನಿರ್ಲಕ್ಷಿತ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಸಹ ದುರ್ಬಲ ಹಿನ್ನೆಲೆಯ ಮಕ್ಕಳ ವ್ಯಾಪ್ತಿಯ ಅಡಿಯಲ್ಲಿ ಬರುತ್ತಾರೆ.

ಚಿತ್ರ ಕ್ರೆಡಿಟ್ - ಪುರುಸೊತ್ತಮ್ ಠಾಕೂರ್
ಕಳ್ಳಸಾಗಣೆಗೊಂಡಿರುವ, ಲಿಂಗ ಮತ್ತು ಜಾತಿ/ಸಮುದಾಯ-ಆಧರಿತ ತಾರತಮ್ಯಕ್ಕೆ ಒಳಗಾಗಿರುವ, ಬಾಲ್ಯವಿವಾಹ ಮತ್ತು ಹದಿಹರೆಯದ ಗರ್ಭಧಾರಣೆಗೆ ಬಲಿಪಶುಗಳಾಗಿರುವ ಮತ್ತು ಲೈಂಗಿಕ ಮತ್ತು ಆನ್ಲೈನ್ ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರಾಗಿರುವ ದುರ್ಬಲ ಹಿನ್ನೆಲೆಯ ಮಕ್ಕಳ ಮೇಲೆ ಸಹ ನಾವು ಗಮನಹರಿಸುತ್ತೇವೆ.
ಅಪರಾಧವೆಸಗಿರುವ ಅಥವಾ ವ್ಯಸನಕ್ಕೊಳಗಾದ ಮಕ್ಕಳು, ನಾವು ಗಮನಹರಿಸುವ ಮತ್ತೊಂದು ದುರ್ಬಲ ಹಿನ್ನೆಲೆಯ ಮಕ್ಕಳ ಗುಂಪಾಗಿದೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಮಕ್ಕಳ ವ್ಯಾಪಕ ಗುಂಪಿಗೆ ಸಂಬಂಧಿಸಿದ ಕೆಲಸವನ್ನು ನಾವು ಹಲವಾರು ಮಾರ್ಗಗಳ ಮೂಲಕ ನಿರ್ವಹಿಸುತ್ತೇವೆ. ಅವುಗಳಲ್ಲಿ ಮೊದಲನೆಯ ಹಂತದಲ್ಲಿ ಬಾಲ ಮಂದಿರಗಳು ಮತ್ತು ವೀಕ್ಷಣಾಲಯಗಳಂತಹ ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ ಇರುವ ಮಕ್ಕಳಿಗೆ ಸಾಂಸ್ಥಿಕ ಬೆಂಬಲವನ್ನು ಒದಗಿಸಲಾಗುತ್ತದೆ. ಅಂತಹ ಮಕ್ಕಳಿಗೆ ಪೌಷ್ಟಿಕಾಂಶ, ಶಿಕ್ಷಣ, ಆಪ್ತ ಸಮಾಲೋಚನೆ ಮತ್ತು ಆರೋಗ್ಯ ರಕ್ಷಣೆಯ ಸೌಲಭ್ಯಗಳು ಉತ್ತಮವಾಗಿ ದೊರೆಯುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಇದರಿಂದ ನಮಗೆ ನೆರವಾಗುತ್ತದೆ.
ಮಕ್ಕಳನ್ನು/ ಆರೈಕೆಯಿಂದ ಹೊರಗುಳಿದವರನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಒಂದುಗೂಡಿಸಲು ಸಹ ನಾವು ಪ್ರೋತ್ಸಾಹಿಸುತ್ತೇವೆ. ಜೊತೆಗೆ, ತರುವಾಯದ ಸೇವೆಗಳ ಭಾಗವಾಗಿ ಕೌಶಲ್ಯ ತರಬೇತಿ ಅಥವಾ ಉನ್ನತ ಶಿಕ್ಷಣದಂತಹ ಅವಕಾಶಗಳನ್ನು ಒದಗಿಸುತ್ತೇವೆ.
ನಾವು ಸಮುದಾಯ-ಆಧರಿತ ಮಧ್ಯಪ್ರವೇಶಗಳಾದ ಮಕ್ಕಳ ಕೇಂದ್ರಗಳು ಹಾಗೂ ಗುಂಪುಗಳನ್ನು ಬೆಂಬಲಿಸುತ್ತೇವೆ. ಅವು ಶಾಲಾ ನಂತರದ ಕಲಿಕೆಗೆ ಬೆಂಬಲವನ್ನು, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಓದುವುದು ಮತ್ತು ಬರೆಯುವುದನ್ನು, ಪೌಷ್ಠಿಕಾಂಶ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಕುರಿತು ಜಾಗೃತಿಯನ್ನು ಒದಗಿಸುತ್ತವೆ. ಪೋಷಕರು ಮತ್ತು ಸಮುದಾಯ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳ ಕುರಿತಾದ ಹೆಚ್ಚಿದ ಜಾಗೃತಿಯು ಬಾಲಕಾರ್ಮಿಕತೆ, ಮಕ್ಕಳ ಕಳ್ಳಸಾಗಣೆ ಮುಂತಾದ ಉಲ್ಲಂಘನೆಗಳ ವಿರುದ್ಧ ದಾಖಲಾಗುವ ಪ್ರಕರಣಗಳ ಸಂಖ್ಯೆಯ ರೂಪದಲ್ಲಿ ಹೊರಹೊಮ್ಮುತ್ತದೆ.
ನಾವು ಮಕ್ಕಳನ್ನು ರಕ್ಷಿಸಲು ವ್ಯಕ್ತಿ-ವೃತ್ತಾಂತ ಕಾರ್ಯವನ್ನು ಸಹ ನಿರ್ವಹಿಸುತ್ತೇವೆ, ಮನೋ-ಸಾಮಾಜಿಕ ಮತ್ತು ವೈದ್ಯಕೀಯ ಅಗತ್ಯತೆಗಳು, ಕಾನೂನು ನೆರವು ಮತ್ತು ಪರಿಹಾರದ ಬೆಂಬಲವನ್ನು ಒದಗಿಸುತ್ತೇವೆ. ಈ ದಿಕ್ಕಿನಲ್ಲಿನ ನಮ್ಮ ಕೆಲಸವು ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ದಾಖಲಾಗಿರುವುದು ಮತ್ತು ಉಳಿದುಕೊಂಡಿರುವುದನ್ನು ಖಚಿತಪಡಿಸಿದೆ.
ಮಕ್ಕಳ ಕ್ಷೇತ್ರದಲ್ಲಿ ನಾವು ನಮ್ಮ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತೇವೆ.